ಭಾರತದ ನಾಣ್ಯ ಪದ್ಧತಿ

ಇಂಗ್ಲಿಷೀನ ಕರೆನ್ಸಿ ಎಂಬುದಕ್ಕೆ ಪರ್ಯಾಯವಾಗಿ ಚಲಾರ್ಥ, ನಾಣ್ಯ ಎಂಬ ಪದಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ. 
ಇತಿಹಾಸ: ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಭಾರತದಲ್ಲಿ ತನ್ನ ಆಡಳಿತ ಪ್ರಾರಂಭಿಸಿದಾಗ ಭಾರತದ ನಾಣ್ಯ ಪದ್ಧತಿ ಬಹಳ ಗೊಂದಲಮಯ ಸ್ಥಿತಿಯಲ್ಲಿತ್ತು. ಭಾರತದ ಹಲವು ಸ್ವತಂತ್ರ ರಾಜ್ಯಗಳು ತಮ್ಮದೇ ಆದ ನಾಣ್ಯಪದ್ಧತಿಗಳನ್ನು ಅನುಸರಿಸುತ್ತಿದ್ದವು. ಆಯಾ ರಾಜ್ಯಗಳ ಎಲ್ಲೆಯೊಳಗೆ ಮಾತ್ರ ಆ ನಾಣ್ಯಗಳು ಶಾಸನ ಸಮ್ಮತ ನಾಣ್ಯಗಳಾಗಿದ್ದವು. ಈ ಕಾರಣದಿಂದ ದೇಶಾದ್ಯಂತ ನಡೆಯಬೇಕಾದ ವ್ಯಾಪಾರವ್ಯವಹಾರಗಳಿಗೆ ಬಹಳ ಅಡಚಣೆಯುಂಟಾಗಿತ್ತು. ಇಡೀ ದೇಶಕ್ಕೆ ಅನ್ವಯಿಸುವ ನಾಣ್ಯ ಪದ್ಧತಿಯೊಂದನ್ನು ವ್ಯವಸ್ಥೆಗೊಳಿಸುವುದರಿಂದ ಈಸ್ಟ್ ಇಂಡಿಯ ಕಂಪನಿಯ ವ್ಯವಹಾರಗಳೂ ಸುಗಮಗೊಳ್ಳುವುವೆಂದು ಭಾವಿಸಿದ್ದರಿಂದ ನಾಣ್ಯ ಪದ್ಧತಿಯ ಸುಧಾರಣೆಗೆ ಕಂಪನಿ ಆದ್ಯ ಗಮನ ನೀಡಿತು. 1806ರಲ್ಲಿಯೇ ಕಂಪನಿಯ ನಿರ್ದೇಶಕರು ಭಾರತದ ಏಕರೂಪ ನಾಣ್ಯ ಪದ್ಧತಿಯನ್ನು ಆಚರಣೆಗೆ ತರಲು ಅನುಮತಿ ನೀಡಿದ್ದರು. ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನೊಳಗೊಂಡ ದ್ವಿಲೋಹ ನಾಣ್ಯ ಪದ್ಧತಿಯಲ್ಲಿ ನ್ಯೂನತೆಗಳು ಕಂಡುಬಂದುದರಿಂದ ಕಂಪನಿ ಬೆಳ್ಳಿಯ ರೂಪಾಯಿಯನ್ನು ಶಿಷ್ಟ ಹಣ (ಸ್ಟಾಂಡರ್ಡ್ ಮನಿ) ಎಂದು ಒಪ್ಪಿಕೊಂಡಿತು. ಆದರೆ ಚಲಾವಣೆಯಲ್ಲಿದ್ದ ಬೆಳ್ಳಿ ರೂಪಾಯಿಯ ತೂಕ ಮತ್ತು ಲೋಹದ ಗುಣಮಟ್ಟದಲ್ಲಿ ಏಕತೆ ಇರಲಿಲ್ಲ. ದೇಶದ ವಿವಿಧ ಭಾಗಗಳಲ್ಲಿ ನಾಣ್ಯಗಳನ್ನು ಟಂಕಿಸಲಾಗುತ್ತಿತ್ತು. ಈ ನ್ಯೂನತೆಗಳನ್ನೆಲ್ಲ ಹೋಗಲಾಡಿಸುವುದೇ 1835ರ ನಾಣ್ಯ ಅಧಿನಿಯಮದ ಉದ್ದೇಶವಾಗಿತ್ತು.

1835ರ ಕರೆನ್ಸಿ ಅಧಿನಿಯಮದ ಪ್ರಕಾರ ಬ್ರಿಟಿಷ್ ಭಾರತದಲ್ಲಿ ಏಕರೂಪದ ನಾಣ್ಯ ಪದ್ಧತಿ ಜಾರಿಗೆ ಬಂತು. 190 ಗ್ರೇನ್ ತೂಕ ಮತ್ತು  ಗುಣಮಟ್ಟದ ಬೆಳ್ಳಿ ನಾಣ್ಯ ರಾಷ್ಟ್ರಾದ್ಯಂತ ವಿಧಿಮಾನ್ಯ ನಾಣ್ಯವಾಯಿತು. ಆದರೂ ಚಿನ್ನದ ನಾಣ್ಯವನ್ನು ಚಲಾವಣೆಯಿಂದ ತಪ್ಪಿಸುವ ಉದ್ದೇಶವಿರಲಿಲ್ಲ. ಈ ಅಧಿನಿಯಮದ 180 ಗ್ರೇನ್ ತೂಕ ಮತ್ತು  ಗುಣಮಟ್ಟದ ಚಿನ್ನದ ನಾಣ್ಯಗಳನ್ನು ಟಂಕಿಸುವುದಕ್ಕೂ ಅವಕಾಶ ಮಾಡಿಕೊಟ್ಟಿತ್ತು. ಈ ನಾಣ್ಯಗಳು ಮೊಹರ್ ಎಂಬ ಹೆಸರಿನ ಐದು, ಹತ್ತು, ಹದಿನೈದು ಮತ್ತು ಮೂವತ್ತು ರೂಪಾಯಿಗಳ ಮೌಲ್ಯದವಾಗಿದ್ದವು. ಆದರೆ ಈ ಚಿನ್ನದ ನಾಣ್ಯಗಳು ವಿಧಿಮಾನ್ಯ ಪ್ರೆಸಿಡೆನ್ಸಿ ಬ್ಯಾಂಕುಗಳಿಂದ ಚಲಾವಣೆಗೆ ಬಿಡುಗಡೆಮಾಡಲಾಗಿದ್ದ ಕಾಗದದ ಹಣವೂ ವಿಧಿಮಾನ್ಯ ಹಣವಾಗಿರಲಿಲ್ಲ. 1835ರ ನಾಣ್ಯ ಅಧಿನಿಯಮದ ಬೆಳ್ಳಿಯ ರೂಪಾಯಿ ಒಂದನ್ನೇ ವಿಧಿಮಾನ್ಯ ಹಣವಾಗಿ ಮಾಡಿತು.

ಬೆಳ್ಳಿಯ ನಾಣ್ಯ ಮಾತ್ರ ವಿಧಿಮಾನ್ಯ ಹಣವಾದ ಮೇಲೆ ಚಲಾವಣೆಯಲ್ಲಿದ್ದ ಚಿನ್ನದ ನಾಣ್ಯಗಳು ತೆರಿಗೆ ಮತ್ತಿತರ ಸಾರ್ವಜನಿಕ ಬಾಕಿಗಳ ಪಾವತಿಗೆ ಒಂದು ಮೊಹರಿಗೆ 15 ರೂಪಾಯಿಗಳಂತೆ ಸರ್ಕಾರದ ಖಜಾನೆಯಲ್ಲಿ ಸ್ವೀಕೃತವಾಗುತ್ತಿದ್ದವು. ಆದರೆ ಚಿನ್ನದ ಬೆಲೆ ಬೆಳ್ಳಿಯ ಬೆಲೆಗೆ ಸಂಬಂಧಿಸಿದಂತೆ ಇಳಿಯುವ ಪ್ರವೃತ್ತಿಯದ್ದಾಗಿದ್ದರಿಂದ ಸರ್ಕಾರದ ಖಜಾನೆಯಲ್ಲಿ ಚಿನ್ನದ ನಾಣ್ಯ ಸ್ವೀಕರಿಸುವ ಪದ್ಧತಿಯನ್ನು ಕೈಬಿಡಲಾಯಿತು. ಅಮೆರಿಕ ಮತ್ತು ಆಸ್ಟ್ರೇಲಿಯ ದೇಶಗಳಲ್ಲಿ ಹೊಸ ಚಿನ್ನದ ನಿಕ್ಷೇಪ ಪತ್ತೆಯಾಗಿ ಚಿನ್ನದ ಬೆಲೆ ಗಣನೀಯವಾಗಿ ಕಡಿಮೆಯಾದದ್ದು ಇದಕ್ಕೆ ಕಾರಣವಾಯಿತು. ಸರ್ಕಾರ 1841ರಲ್ಲಿ ಚಿನ್ನದ ನಾಣ್ಯಗಳನ್ನು ಖಜಾನೆಯಲ್ಲಿ ಸ್ವೀಕರಿಬಹುದೆಂದು ಹೊರಡಿಸಿದ್ದ ಆದೇಶವನ್ನು 1553ರಲ್ಲಿ ರದ್ದುಪಡಿಸಿತು. ಇದರಿಂದಾಗಿ ಚಿನ್ನದ ನಾಣ್ಯ ಸೀಮಿತ ಬಳಕೆಯಲ್ಲಿಯೂ ಮುಂದುವರಿಯಲಿಲ್ಲ. ಚಿನ್ನದ ಮೊಹರುಗಳನ್ನು ಬೆಳ್ಳಿಯ ನಾಣ್ಯಕ್ಕೆ ಬೇಡಿಕೆ ಹೆಚ್ಚಿತು. ಅಷ್ಟೇ ಅಲ್ಲದೆ ವಾಣಿಜ್ಯ ಮತ್ತು ವ್ಯಾಪಾರ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದುದರಿಂದ ಹಣದ ಬಳಕೆಯ ಅಗತ್ಯವೂ ಹೆಚ್ಚುತ್ತ ಹೋಯಿತು. ಈ ಬೇಡಿಕೆಗೆ ಅನುಗುಣವಾಗಿ ಬೆಳ್ಳಿಯ ಪೂರೈಕೆ ಸಾಧ್ಯವಾಗದಿದ್ದುದರಿಂದ ಬೆಳ್ಳಿ ನಾಣ್ಯ ಒಂದನ್ನೇ ವಿಧಿಮಾನ್ಯ ಹಣವಾಗಿ ಉಳ್ಳ ಏಕಲೋಹ ನಾಣ್ಯ ಪದ್ಧತಿಯ ಕೊರತೆ ಬೆಳಕಿಗೆ ಬಂದಿತು.

ಚಲಾವಣೆಯಲ್ಲಿದ್ದ ನಾಣ್ಯದ ಮೊತ್ತವನ್ನು ಹೆಚ್ಚಿಸಬೇಕಾಗಿ ಬಂದಾಗ ಎರಡು ರೀತಿಯ ಕ್ರಮಗಳು ಸಾಧ್ಯವಿದ್ದವು: 1 ಚಿನ್ನದ ನಾಣ್ಯಗಳನ್ನು ವಿಧಿಮಾನ್ಯ ನಾಣ್ಯಗಳಾಗಿ ಮಾಡಿ ಬೆಳ್ಳಿಯ ನಾಣ್ಯಗಳಿಗೆ ಪೂರಕವಾಗಿ ಅದನ್ನು ಚಲಾವಣೆಗೆ ಕೊಟ್ಟು ದ್ವಿಲೋಹ ನಾಣ್ಯ ಪದ್ಧತಿಯನ್ನು ಜಾರಿಗೆ ತರುವುದು: 2 ಕಾಗದದ ಹಣವನ್ನು ವಿಧಿಮಾನ್ಯ ಹಣವಾಗಿ ಮಾಡಿ ಬ್ಯಾಂಕುಗಳು ಅವನ್ನು ಮುದ್ರಿಸಿ ನೀಡುವುದಕ್ಕೆ ಬದಲು ಸರ್ಕಾರ ಅವನ್ನು ಮುದ್ರಿಸಿ ಚಲಾವಣೆಗೆ ಕೊಡುವುದು. ಇವುಗಳ ಪೈಕಿ ಚಿನ್ನದ ನಾಣ್ಯಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳ ಅರಿವು ಆಗಲೇ ಆಗಿತ್ತು. ಅಲ್ಲದೆ ದ್ವಿಲೋಹ ನಾಣ್ಯಪದ್ಧತಿ ಇದ್ದಾಗ ಚಿನ್ನ ಮತ್ತು ಬೆಳ್ಳಿಯ ಸಾಪೇಕ್ಷ ಬೆಲೆಗಳಲ್ಲಿ ವ್ಯತ್ಯಾಸವಾದಂತೆಲ್ಲ ಅವುಗಳ ನಡುವಣ ವಿನಿಮಯ ದರವನ್ನೂ ಬದಲಾಯಿಸುತ್ತ ಹೋಗಬೇಕಾಗುತ್ತಿತ್ತು. ಇದರಿಂದ ಉದ್ಭವಿಸುತ್ತಿದ್ದ ಅನಾನುಕೂಲತೆಗಳನ್ನು ಮನಗಂಡು, ಚಿನ್ನದ ನಾಣ್ಯವನ್ನು ಚಲಾವಣೆಗೆ ತರಬೇಕೆಂಬ ಬೇಡಿಕೆ ಇದ್ದರೂ ಗವರ್ನರ್ ಜನರೆಲನ ಕಾರ್ಯನಿರ್ವಾಹಕ ಮಂಡಲಿಯ ಪ್ರಥಮ ಹಣಕಾಸು ಸದಸ್ಯ ಜೇಮ್ಸ್‍ವಿಲ್ಸ್‍ನ್ ಕಾಗದ ನಾಣ್ಯದ ಕಡೆಗೇ ಒಲವು ತೋರಿ 1860ರಲ್ಲಿ ಕಾಗದದ (ಚಲಾರ್ಥನಾಣ್ಯ), ಅಧಿನಿಯಮ ಮಂಡಿಸಿದ. ಇವನ ಅನಂತರ ಅಧಿಕಾರಕ್ಕೆ ಬಂದ ಲೇಂಗ್ ಇದನ್ನು ಜಾರಿಗೆ ತಂದ. ಇದೇ 1861ರ ಕಾಗದ ಚಲಾರ್ಥ ಅಧಿನಿಯಮ. ಇದರ ಪ್ರಕಾರ ಕಾಗದದ ಹಣವನ್ನು ಚಲಾವಣೆಗೆ ಕೊಡುವ ಅಧಿಕಾರವನ್ನು ಪೂರ್ಣವಾಗಿ ಸರ್ಕಾರಕ್ಕೆ ವಹಿಸಲಾಯಿತು. ಬೆಳ್ಳಿ ನಾಣ್ಯಕ್ಕೆ ಪೂರಕವಾಗಿ ಕಾಗದದ ಹಣವನ್ನು ಚಲಾವಣೆಗೆ ಕೊಟ್ಟು ಚಲಾವಣೆಯಲ್ಲಿದ್ದ ಹಣದ ಮೊತ್ತವನ್ನು ಹೆಚ್ಚಿಸಿದಾಗ್ಯೂ ಚಿನ್ನದ ನಾಣ್ಯಕ್ಕಿದ್ದ ಬೇಡಿಕೆ ಕಡಿಮೆಯಾಗಲಿಲ್ಲ. ಚಲಾವಣೆಯಲ್ಲಿ ಸಾಕಷ್ಟು ಪರಿಮಾಣದಲ್ಲಿ ಹಣವಿರಲಿಲ್ಲ. ಆದ್ದರಿಂದ ವಾಣಿಜ್ಯ ವಲಯಗಳಲ್ಲಿ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ಕೂಡಬೇಕೆಂಬ ಬೇಡಿಕೆ ಹೆಚ್ಚುತ್ತಿತ್ತು. ಈ ಹಿನ್ನಲೆ ಗಮನಿಸಿ ಭಾರತದ ನಾಣ್ಯ ಪದ್ಧತಿಯಲ್ಲಿ ಚಿನ್ನದ ನಾಣ್ಯದ ಪಾತ್ರವನ್ನು ಪುನಃ ಪರಿಶೀಲಿಸಬೇಕಾಗಿ ಬಂತು. ಇದನ್ನು ಪರಿಶೀಲಿಸಿದ ಹಣಕಾಸು ಸದಸ್ಯ ಸರ್ ಚಾಲ್ರ್ಸ್ ಟ್ರೆವೆಲ್ಯಾಸ್ ಇಂಗ್ಲೆಂಡ್, ಆಸ್ಟ್ರೇಲಿಯ, ಭಾರತ ಇವುಗಳಲ್ಲಿ ಟಂಕಿಸಲಾದ ಚಿನ್ನದ ನಾಣ್ಯಗಳನ್ನು ವಿಧಿಮಾನ್ಯ ನಾಣ್ಯವಾಗಿ ಚಲಾವಣೆಗೆ ಕೊಡಬೇಕೆಂದು ಸಲಹೆ ಮಾಡಿದ. ಆದರೆ ಸೆಕ್ರೆಟರಿ ಆಫ್ ಸ್ಟೇಟ್ ಈ ಸಲಹೆಯನ್ನು ಒಪ್ಪಲಿಲ್ಲ. ಅದಕ್ಕೆ ಬದಲಾಗಿ, ಹಿಂದೆ ಜಾರಿಯಲ್ಲಿದ್ದಂತೆ ಸಾರ್ವಜನಿಕ ಬಾಕಿಗಳ ಪಾವತಿಗಾಗಿ ಖಜಾನೆಯಲ್ಲಿ ಚಿನ್ನದ ನಾಣ್ಯಗಳನ್ನು ಸ್ವೀಕರಿಸಲು ಅವಕಾಶ ಮಾಡುವುದಕ್ಕೆ ಒಪ್ಪಿಗೆ ನೀಡಲಾಯಿತು. 1916ರ ಕಾಗದ ಚಲಾರ್ಥ ಪ್ರಕಾರ ಚಿನ್ನದ ನಾಣ್ಯಗಳಿಗೆ ವಿನಿಮಯವಾಗಿ ಕಾಗದದ ಹಣವನ್ನು ಹೊರಡಿಸಲು ಅನುಮತಿ ನೀಡಲಾಯಿತು. ಒಂದು ಸವರನ್‍ಗೆ 10 ರೂಪಾಯಿ ಮತ್ತು ಅರ್ಧಸವರನ್‍ಗೆ 5 ರೂಪಾಯಿಯಂತೆ ಚಿನ್ನದ ನಾಣ್ಯಕ್ಕೆ ವಿನಿಮಯವಾಗಿ ಕಾಗದದ ಹಣವನ್ನು ಪಡೆಯುವಂತಾಯಿತು. ಆದರೂ ನಾಣ್ಯ ಪದ್ಧತಿ ಸಮರ್ಪಕವಾದ್ದಾಗಿರಲಿಲ್ಲ. ನಾಣ್ಯ ಪದ್ಧತಿಯ ಅಮೂಲಾಗ್ರ ಪರಿಶೀಲನೆಗೆ ಆಯೋಗವೊಂದರ ರಚನೆಯಾಗಬೇಕೆಂದು ಬಂಗಾಲದ ವಾಣಿಜ್ಯಮಂಡಲಿ ಬೇಡಿಕೆ ಸಲ್ಲಿಸಿತು. ಇದರಂತೆ 1866 ರಲ್ಲಿ ಸರ್ಕಾರ ಮ್ಯಾನ್ಸ್ ಫೀಲ್ಡ್ ಆಯೋಗವನ್ನು ನೇಮಕ ಮಾಡಿತು.

ಈ ಆಯೋಗ ಮುಖ್ಯವಾಗಿ ಎರಡು ವಿಷಯಗಳನ್ನು ಪರಿಶೀಲಿಸಬೇಕಾಗಿತ್ತು. 1 ಚಲಾರ್ಥ ಪದ್ಧತಿಯಲ್ಲಿ ಚಿನ್ನದ ನಾಣ್ಯಗಳ ಪಾತ್ರ. ನಾಣ್ಯದ ಬೇಡಿಕೆ ಹೆಚ್ಚುತ್ತಿದ್ದುದರ ಮುನ್ನೆಲೆಯಲ್ಲಿ ಇದನ್ನು ಪರಿಶೀಲಿಸಬೇಕಾಗಿತ್ತು. 2 ಈಗಾಗಲೇ ಜಾರಿಯಲ್ಲಿದ್ದ ಕಾಗದದ ಚಲಾರ್ಥ ಪದ್ಧತಿಯನ್ನು ಪರಿಶೀಲಿಸಿ ಆಯೋಗ ಮಾಡಿದ ಶಿಪಾರಸುಗಳೂ ಇವು; 1 ಚಿನ್ನದ ನಾಣ್ಯಗಳಿಗೆ ಎಲ್ಲೆಡೆ ಬೇಡಿಕೆ ಇರುವುದರಿಂದ ರೂ 15. 10 ಮತ್ತು 5ರ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ಕೊಟ್ಟು ಅವನ್ನು ವಿಧಿಮಾನ್ಯ ಹಣವಾಗಿ ಮಾಡಬೇಕು. ಚಿನ್ನ, ಬೆಳ್ಳಿ ಮತ್ತು ಕಾಗದದ ನಾಣ್ಯಗಳೆಲ್ಲವೂ ಒಟ್ಟಿಗೆ ಚಲಾವಣೆಯಲ್ಲಿರಬೇಕು. 2 ಕಾಗದದ ಹಣಕ್ಕೆ ಸಂಬಂಧಿಸಿದಂತೆ ಆಯೋಗ ಸುಧಾರಣೆಯನ್ನು ಸಲಹೆ ಮಾಡಿತು. ಯಾವುದೇ ನಿರ್ದಿಷ್ಟ ಪ್ರದೇಶದಲ್ಲಷ್ಟೇ ಅಲ್ಲದೆ ದೇಶದ ಯಾವುದೇ ಭಾಗದಲ್ಲಾದರೂ ಮರಿಸಬಹುದಾದ ಸಾರ್ವತ್ರಿಕ ಹಣವನ್ನು ಚಲಾವಣೆಗೆ ತರಬೇಕೆಂದು ಶಿಫಾರಸು ಮಾಡಿತು.

ಮ್ಯಾನ್ಸ್ ಫೀಲ್ಡ್ ಆಯೋಗದ ಮುಖ್ಯ ಶಿಫಾರಸುಗಳನ್ನು ಸರ್ಕಾರ ಜಾರಿಗೆ ಕೊಡಲಿಲ್ಲ. ಆ ಆಯೋಗದ ಸಲಹೆಯಂತೆ ಆದ ಒಂದೇ ಒಂದು ಮಾರ್ಪಾಡೆಂದರೆ ಸವರನ್ ರೂ 10ರಿಂದ ಗೆ ಬದಲಾಯಿತು. ಆದರೆ ಭಾರತಕ್ಕೆ ಚಿನ್ನ ಹರಿದು ಬರುವಂತೆ ಮಾಡಲು ಈ ಕ್ರಮ ಸಾಕಷ್ಟು ಪ್ರೇರಣೆ ನೀಡಲಿಲ್ಲ. ಒಟ್ಟಿನಲ್ಲಿ ಭಾರತದ ನಾಣ್ಯ ಪದ್ಧತಿ ಎದುರಿಸುತ್ತಿದ್ದ ಬಿಕ್ಕಟ್ಟಿನ ಪರಿಸ್ಥಿತಿಗೆ ಪರಿಹಾರ ದೊರಕಲಿಲ್ಲ.

	1873ರ ಅನಂತರದ ಕೆಲವು ಬೆಳೆವಣಿಗೆಗಳಿಂದ ಭಾರತದ ನಾಣ್ಯ ಪದ್ಧತಿ ಮತ್ತಷ್ಟು ತೊಂದರೆಗೊಳಗಾಯಿತು. ಐರೋಪ್ಯ ರಾಷ್ಟ್ರಗಳು ರಜತ ಪ್ರಮಿತಿಯಿಂದ ಸ್ವರ್ಣಪ್ರಮಿತಿಗೆ ಬದಲಾವಣೆ ಮಾಡಿಕೊಂಡವು. ಬೆಳ್ಳಿಗೆ ಬೇಡಿಕೆ ಕಡಿಮೆಯಾಗುತ್ತಿದ್ದ ಕಾಲದಲ್ಲಿಯೇ ಆದರೆ ಉತ್ಪಾದನೆ ಅಧಿಕಗೊಳ್ಳುತ್ತಿದ್ದುದರಿಂದ ಅದರ ಬೆಲೆ ಗಣನೀಯವಾಗಿ ಇಳಿಯಿತು. ಇಂಗ್ಲೆಂಡ್ ಸ್ವರ್ಣಪ್ರಮಿತಿಗೆ ಅಂಟಿಕೊಂಡಿದ್ದರೂ ಭಾರತದ ರಜತ ಪ್ರಮಿತಿಯೇ ಮುಂದುವರಿದಿತ್ತು. ಆದ್ದರಿಂದ ಸ್ವರ್ಣಪ್ರಮಿತಿಯನ್ನು ಆಧರಿಸಿದ್ದ ಪೌಂಡಿಗೆ ಸಂಬಂಧಿಸಿದಂತೆ ಬೆಳ್ಳಿಯ ರೂಪಾಯಿಯ ಬೆಲೆ ಇಳಿಮೊಗವಾಯಿತು. ಇದರಿಂದ ಉದ್ಫವಿಸಿದ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಬೆಳ್ಳಿಯ ನಾಣ್ಯಗಳನ್ನು ಎಷ್ಟಾದರೂ ಟಂಕಿಸುವುದಕ್ಕೆ ಇದ್ದ ಅವಕಾಶವನ್ನು ತಪ್ಪಿಸಿ ಸ್ವರ್ಣಮಾನವನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಸಲಹೆ ಮಾಡಿತು. ಅದನ್ನು ಪರಿಶೀಲಿಸುವುದಕ್ಕಾಗಿ 1892ರಲ್ಲಿ ಲಾರ್ಡ್ ಹರ್ಷೆಲ್ ಅಧ್ಯಕ್ಷತೆಯ ಸಮಿತಿಯೊಂದನ್ನು ನೇಮಕಮಾಡಲಾಯಿತು.

	ಈ ಸಮಿತಿಯ ಮುಖ್ಯ ಸಲಹೆಗಳು ಇವು: 1 ಭಾರತದ ರೂಪಾಯಿಯ ಸಂಪೂರ್ಣ ವಿಧಿಮಾನ್ಯ ಹಣವಾಗಿ ಉಳಿಯಬೇಕು. 2 ಮುಕ್ತವಾಗಿ ಬೆಳ್ಳಿ ನಾಣ್ಯಗಳನ್ನು ಸಾರ್ವಜನಿಕರು ಟಂಕಿಸುವುದನ್ನು ನಿಲ್ಲಿಸಬೇಕು. ಆದರೆ ಸಾರ್ವಜನಿಕರು ಬೇಕೆಂದರೆ, ಚಿನ್ನಕ್ಕೆ ವಿನಿಮಯವಾಗಿ ಒಂದು ರೂಪಾಯಿಯ 1 ಷಿಲ್ಲಿಂಗ್ 4 ಪೆನ್ನಿದರದಲ್ಲಿ ಬೆಳ್ಳಿಯ ರೂಪಾಯಿಯ ನಾಣ್ಯ ಕೊಡುವ ಅಥವಾ ನೋಟುಗಳನ್ನು ಕೊಡುವ ಸ್ವಾತಂತ್ರ್ಯಗಳನ್ನು ಸರ್ಕಾರ ಉಳಿಸಿಕೊಳ್ಳಬೇಕು. 1893ರಲ್ಲಿ ಶಾಸನ ಮಾಡಿ ಈ ತರುವುದರ ಮೊದಲ ಹೆಜ್ಜೆಯಾಯಿತು. ಆದರೂ 1893ರ ಅನಂತರವೂ ಪದ್ಧತಿ ಸಮಸ್ಯಾತ್ಮಕವಾಗಿಯೇ ಉಳಿಯಿತು. ಬೆಳ್ಳಿಯ ಬೆಲೆ ಇಳಿದಿದ್ದರಿಂದ ರೂಪಾಯಿಯ ವಿನಿಮಯ ದರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಯಿತು. ಈ ಹಿನ್ನಲೆ ಇದ್ದುದರಿಂದ ಪರಿಪೂರ್ಣ ಸ್ವರ್ಣಪ್ರಮಿತಿಯನ್ನು ಜಾರಿಗೆ ತರಬೇಕೆಂದೂ ರೂಪಾಯಿ ವಿನಿಮಯ ದರದಲ್ಲಿ ಸ್ಥಿರತೆ ಮೂಡುವ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಒತ್ತಾಯಬಂತು. ಇದಕ್ಕನುಗುಣವಾಗಿ ಭಾರತ ಸರ್ಕಾರ ಚಿನ್ನದ ನಾಣ್ಯ ಪ್ರಮುಖ ಚಲಾವಣಾ ಮಾಧ್ಯಮವಾಗುಗುಳ್ಳ ಸ್ವರ್ಣ ಪ್ರಮಿತಿಯನ್ನು ಜಾರಿಗೆ ಕೊಡಬೇಕೆಂದು ಸೂಚಿಸಿತು. ಇದರ ಪರಿಶೀಲನೆಗೆ 1889ರಲ್ಲಿ ಸರ್ ಹೆನ್ರಿ ಪೌಲರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ನೇಮಕಗೊಂಡಿತು.

	ಈ ಸಮಿತಿಯ ಸಲಹೆಗಳು ಇವು: 1 ಭಾರತದಲ್ಲಿ ಸ್ವರ್ಣಪ್ರಮಿತಿಯನ್ನು ಜಾರಿಗೆ ತರಬೇಕು. ಚಿನ್ನದ ನಾಣ್ಯ ವಿನಿಮಯ ಹಣವಾಗಿರಬೇಕು. ನಿರ್ಬಂಧರಹಿತವಾಗಿ ಚಿನ್ನದ ನಾಣ್ಯಗಳನ್ನು ಟಂಕಿಸಲು ಟಂಕಸಾಲೆಯನ್ನು ತೆರೆದಿಡಬೇಕು. ಇದರ ವ್ಯವಸ್ಥೆಯಾಗುವ ತನಕ ಸವರನ್ನನ್ನು ಅಪರಿಮಿತ ವಿನಿಮಯ ಹಣವಾಗಿ ಒಪ್ಪಿಕೊಳ್ಳಬೇಕು. 2. ರೂಪಾಯಿಯ ವಿನಿಮಯ ದರ 1 ಷಿಲ್ಲಿಂಗ್ 4 ಪೆನ್ನಿ ಮಟ್ಟದಲ್ಲಿ ಸ್ಥಿರಗೊಳ್ಳಬೇಕು. 2 ರೂಪಾಯಿ ವಿನಿಮಯವಾಗಿ ಎಷ್ಟಾದರೂ ಚಿನ್ನವನ್ನು ಸರ್ಕಾರ ನೀಡುವ ಭರವಸೆ ಕೊಡಬೇಕಾಗಿಲ್ಲ; ಆದರೆ ವಿದೇಶಿ ವ್ಯವಹಾರಗಳಿಗಾಗಿ ಚಿನ್ನ ಬೇಕಾದಾಗ ಅದನ್ನು ಸರ್ಕಾರ ಒದಗಿಸಬೇಕು. ಇದರ ಆವಶ್ಯಕತೆಗಾಗಿ ಚಿನ್ನದ ಮೀಸಲೊಂದನ್ನು ಸ್ಥಾಪಿಸಬೇಕು. ರೂಪಾಯಿನಾಣ್ಯವನ್ನು ತಯಾರಿಸುವುದರಿಂದ ಬರುವ ಲಾಭದಿಂದ ಚಿನ್ನ ಮತ್ತು ಸ್ಟರ್ಲಿಂಗ್ ಪ್ರತಿಭೂತಿಗಳನ್ನು ಕೊಂಡು ಮೀಸಲನ್ನು ಬೆಳೆಸಬೇಕು.

	ಈ ಸಲಹೆಗಳನ್ನು ಜಾರಿಗೆ ತರಲು ಸರ್ಕಾರ ಒಪ್ಪಿ 1899ರಲ್ಲಿ ಒಂದು ಅಧಿನಿಯಮವನ್ನು ರೂಪಿಸಿತು. ಇದರ ಪ್ರಕಾರ ಸವರನ್ ಮತ್ತು ಅರ್ಧ ಸವರನ್ನನ್ನು ಬ್ರಿಟಿಷ್ ಭಾರತದ ಆದ್ಯಂತ ವಿಧಿಮಾನ ಹಣವಾಗಿ ಮಾಡಲಾಯಿತು. ನಾಣ್ಯ ಟಂಕಿಸುವುದರಿಂದ ಬಂದ ಲಾಭದಿಂದ ಚಿನ್ನದ ನಿಧಿಯೊಂದನ್ನು ಸ್ಥಾಪಿಸಲಾಯಿತು.

	ಪೂರ್ಣ ಸ್ವರ್ಣ ಪ್ರಮಿತಿಯನ್ನು ಜಾರಿಗೊಳಿಸಲು ಉದ್ದೇಶಿಸಿದ್ದರೂ ಅದು ಕಾರ್ಯಗತವಾಗಲಿಲ್ಲ. ಚಿನ್ನದ ನಾಣ್ಯಗಳು ಅಧಿಕ ಮೌಲ್ಯದವಾಗಿದ್ದುದರಿಂದ ನಿತ್ಯದ ವ್ಯವಹಾರಗಳಲ್ಲಿ ಅದನ್ನು ಬಳಸುವುದು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಸುವರ್ಣನಾಣ್ಯದ ಬಳಕೆ ಜನಾದರಣೀಯವಾಗಲಿಲ್ಲ. ಅಂತಿಮವಾಗಿ ಸ್ವರ್ಣಪ್ರಮಿತಿಯಿಂದ ದೂರ ಸರಿದು ಸ್ಟರ್ಲಿಂಗ್ ವಿನಿಮಯ ಪ್ರಮಿತಿ ಜಾರಿಗೆ ಬಂತು. ಇದರಂತೆ ಚಿನ್ನದ ನಾಣ್ಯ ಚಲಾವಣೆಯಲ್ಲಿರುವುದರ ಬದಲು ಸ್ವರ್ಣಪ್ರಮಿತಿಯ ಆಧಾರದ ಮೇಲಿದ್ದು ಚಿನ್ನದಷ್ಟೇ ಮುಖ್ಯವೆನಿಸಿದ್ದ ಸ್ಟರ್ಲಿಂಗನ್ನು ರೂಪಾಯಿಗೆ ವಿನಿಮಯವಾಗಿ ಕೊಡುವ ಕರಾರಿಗೆ ಸರ್ಕಾರ ಒಳಪಟ್ಟಿತು. ಚಿನ್ನದ ಟಂಕಸಾಲೆಯನ್ನು ಸ್ಥಾಪಿಸುವ ಉದ್ದೇಶವನ್ನು 1903ರಲ್ಲಿ ಕೈಬಿಡಲಾಯಿತು. 1904ರಲ್ಲಿ ಚಿನ್ನದ ಮೀಸಲನ್ನು ಇಂಗ್ಲೆಂಡಿಗೆ ವರ್ಗಾಯಿಸಲಾಯಿತು ಮತ್ತು ಚಿನ್ನದ ಮೀಸಲೇ ಅಲ್ಲದೆ ಕಾಗದ ನಾಣ್ಯ ಮೀಸಲನ್ನು ಭಾಗಶಃ ಭಾರತದಲ್ಲಿ ಲಂಡನ್‍ನಲ್ಲಿ ಇಡಲಾಗಿತ್ತು. ಚಿನ್ನದ ನಾಣ್ಯಗಳನ್ನು ಚಲಾವಣೆಗೆ ಕೊಡಬೇಕು ಮತ್ತು ಚಿನ್ನದ ನಾಣ್ಯಗಳ ತಯಾರಿಕೆಗೆ ಟಂಕಸಾಲೆಯನ್ನು ತೆರೆಯಬೇಕೆಂಬ ವಾದ 1977-12ರಲ್ಲಿ ಮತ್ತೆ ಈ ಕುರಿತ ಇತರ ಸಮಸ್ಯೆಗಳ ಪರಿಶೀಲನೆಗೆ 1913ರಲ್ಲಿ ಆಸ್ಟಿನ್ ಚೇಂಬರ್ಲಿನ್ ಅದ್ಯಕ್ಷತೆಯಲ್ಲಿ ಒಂದು ಆಯೋಗವನ್ನು ನೇಮಿಸಲಾಯಿತು.

	ಭಾರತದ ನಾಣ್ಯ ಪದ್ಧತಿಯಲ್ಲಿ ಅನೇಕ ಪ್ರಯೋಗಗಳು ನಡೆಯುತ್ತ ಬಂದಿವೆ ಹೊರತು ನಿರ್ದಿಷ್ಟ ಉದ್ದೇಶದಿಂದ ಕರೆನ್ಸಿ ಪದ್ಧತಿ ರೂಪಿತವಾಗಿಲ್ಲವೆಂದು ಆಯೋಗ ಅಭಿಪ್ರಾಯಪಟ್ಟಿತು. ಆದರೆ ಯಾವುದೇ ಮೂಲಭೂತ ಮಾರ್ಪಾಡುಗಳನ್ನು ಸಲಹೆ ಮಾಡಲಿಲ್ಲ. ಆಗಲೇ ಜಾರಿಯಲ್ಲಿದ್ದ ಸ್ವರ್ಣ ವಿನಿಮಯ ಪ್ರಮಿತಿಯೇ ಭಾರತಕ್ಕೆ ಸರಿಹೊಂದುತ್ತದೆಂದು ಈ ಆಯೋಗ ಅಭಿಪ್ರಾಯಪಟ್ಟಿತು. ಭಾರತದ ಜನತೆ ಚಿನ್ನದ ನಾಣ್ಯಬೇಕೆಂದು ಆಶಿಸುವುದಿಲ್ಲ ಹಾಗೂ ಚಿನ್ನದ ನಾಣ್ಯ ಚಲಾವಣೆ ಅಗತ್ಯ ಅಷ್ಟೇನೂ ಇಲ್ಲ ಎಂದು ಆಯೋಗ ಭಾವಿತು. ಒಟ್ಟಿನಲ್ಲಿ ರೂಪಾಯಿ ಮತ್ತು ನೋಟುಗಳು ಭಾರತಕ್ಕೆ ಸರಿಹೊಂದುವ ನಾಣ್ಯ ಪದ್ಧತಿಯನ್ನು ಒದಗಿಸುತ್ತವೆಂದು ಪ್ರತಿಪಾದಿಸಲಾಯಿತು. ಚಿನ್ನದ ನಾಣ್ಯಗಳನ್ನು ಟಂಕಿಸುವುದಕ್ಕಾಗಿ ಭಾರತದಲ್ಲಿ ಟಂಕಸಾಲೆ ತೆರೆಯುವ ಆವಶ್ಯಕತೆ ಇಲ್ಲವೆಂದೂ ಅಭಿಪ್ರಾಯ ಪಡಲಾಯಿತು. ಆದರೆ ಭಾವನ್ಮಾತಕ ಕಾರಣಗಳಿಗೆ ಚಿನ್ನದ ನಾಣ್ಯಗಳು ಬೇಕೆನಿಸಿದರೆ ಮತ್ತು ಅದರ ವೆಚ್ಚವನ್ನು ಭರಿಸಲು ಸರ್ಕಾರ ಇಷ್ಟಪಡುವುದಾದರೆ ಸವರನ್ ಆಯೋಗ ಶಿಫಾರಸು ಮಾಡಿತು. ಚಿನ್ನದ ಮೀಸಲಿಗೆ ಸಂಬಂಧಿಸಿದಂತೆಯೂ ಆಯೋಗ ಶಿಫಾರಸು ಮಾಡಿತು. ಚಿನ್ನದ ಮೀಸಲನ್ನು ಭಾಗಶಃ ಭಾರತದಲ್ಲಿ ಮತ್ತು ಭಾಗಶಃ ಲಂಡನ್ನಿನಲ್ಲಿ ಇಡಬೇಕು; ನಾಣ್ಯ ತಯಾರಿಸುವುದರಿಂದ ದೊರಕುವ ಲಾಭವನ್ನು ಪೂರ್ಣವಾಗಿ ಸ್ವರ್ಣಸಮಿತಿ ಮೀಸಲಿಗೆ ಜಮಾ ಮಾಡಬೇಕು. ಇದರ ಬಹುಪಾಲು ವಾಸ್ತವವಾಗಿ ಚಿನ್ನದ ರೂಪದಲ್ಲಿರಬೇಕು. ಕಾಗದದ ಹಣ ಹೆಚ್ಚು ವ್ಯಾಪಕವಾಗಿ ಬಳಕೆಗೆ 500 ನೋಟುಗಳನ್ನು ಸಾರ್ವತ್ರಿಕ ಬಳಕೆ ತರಬೇಕು ಎಂದು ಸಲಹೆ ಮಾಡಿತು.

	ಚೇಂಬರ್ಲಿನ್ ಆಯೋಗದ ವರದಿ ಪ್ರಕಟವಾದ ವರ್ಷವೇ (1914) ಒಂದನೆಯ ಮಹಾಯುದ್ಧ ಪ್ರಾರಂಭವಾಯಿತು. ಯುದ್ಧದಲ್ಲಿ ಉಂಟಾದ ಪರಿಸ್ಥಿತಿಯ ಕಾರಣದಿಂದಾಗಿ ವರದಿಯ ಸಲಹೆಗಳನ್ನು ಪೂರ್ಣವಾಗಿ ಜಾರಿಗೆ ಕೊಡುವುದು ಸಾಧ್ಯವಾಗಲಿಲ್ಲ. ಆಚರಣೆಯಲ್ಲಿದ್ದ ಸ್ವರ್ಣವಿನಿಮಯ ಪ್ರಮಿತಿ ಸಮರ್ಪಕವಾಗಿರಲಿಲ್ಲ. ಬೆಳ್ಳಿಯ ಉತ್ಪಾದನೆ ಕಡಿಮೆಯಾಗುತ್ತಿದ್ದು ಬೆಳ್ಳಿಯ ನಾಣ್ಯಕ್ಕೆ ಬೇಡಿಕೆ ಹೆಚ್ಚುತ್ತ ಹೋದುದರಿಂದ ಅದರ ಬೆಲೆಯಲ್ಲಿ ಏರಿಕೆಯಾಗಿ ರೂಪಾಯಿ ವಿನಿಮಯದರದ ಬದಲಾವಣೆ ಅಗತ್ಯವಾಗಿತ್ತು. 1 ಷಿಲಿಂಗ್ 4 ಪೆನ್ನಿಗಿಂಗ ಹೆಚ್ಚಿನ ಮಟ್ಟದಲ್ಲಿ ವಿನಿಮಯದರ ಇರುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ರೂಪಾಯಿಯನ್ನು ಕರಗಿಸಿ ಅಥವಾ ರಫ್ತು ಮಾಡುವ ಅಪಾಯವಿತ್ತು. ಈ ಕಾರಣದಿಂದಾಗಿ ವಿನಿಮಯದರ ಬದಲಾಗುತ್ತ ಹೋಗಿ ಡಿಸಂಬರ್ 1919ರ ವೇಳೆಗೆ ಅದು 2 ಷಿಲಿಂಗ್ 4 ಪೆನ್ನಿ ಆಯಿತು. ಒಂದೇ ಸಮನೆ ಏರುತ್ತಿದ್ದ ವಿನಿಮಯ ದರದಿಂದ ಭಾರತದ ವ್ಯಾಪಾರ ಮತ್ತು ಕೈಗಾರಿಕೆ ಮೇಲೆ ಪ್ರತಿಕೂಲ ಪರಿಣಾಮವುಂಟಾಯಿತು. 1917ರಲ್ಲಿ ಸರ್ಕಾರ ವಿಧಿ ಇಲ್ಲದೆ ಸ್ವರ್ಣವಿನಿಮಯ ಪ್ರಮಿತಿಯನ್ನು ಕೈ ಬಿಡಬೇಕಾಯಿತು. ಈ ಪ್ರಮಿತಿಯನ್ನು ಮತ್ತೆ ಜಾರಿಗೆ ತರುವುದರ ಅಗತ್ಯವನ್ನು ಮನಗಂಡು ಅದರ ಪುನಃ ಪರಿಶೀಲನೆಗೆ ಮತ್ತು ಯುದ್ಧಕಾಲದಲ್ಲಿ ನಾಣ್ಯ ಮತ್ತು ವಿನಿಮಯ ಪದ್ಧತಿಯ ಮೇಲೆ ಉಂಟಾದ ಪರಿಣಾಮಗಳನ್ನು ಪರಿಶೀಲಿಸಲು ಸರ್ ಹೆನ್ರಿ ಬೇಬಿಂಗ್‍ಟನ್ ಸ್ಮಿತ್ ಅಧ್ಯಕ್ಷತೆಯಲ್ಲಿ 1919ರಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. 

	ಈ ಸಮಿತಿಯ ಮುಖ್ಯ ಸಲಹೆಗಳಿವು: 1 ಚಿನ್ನದ ನಾಣ್ಯಗಳ ಬಳಕೆಯನ್ನು ಭಾರತದ ಪ್ರೋತ್ರಾಹಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ; ಆದರೆ ಮುಂಬಯಿಯಲ್ಲಿ ಚಿನ್ನದ ಟಂಕಸಾಲೆಯೊಂದನ್ನು ಸ್ಥಾಪಿಸಿ ಸಣ್ಣ ಪ್ರಮಾಣದಲ್ಲಿ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ಕೊಡಬಹುದು. ಬೆಳ್ಳಿಯ ಪೂರೈಕೆ ಸಾಕಷ್ಟು ಇಲ್ಲದಿರುವುದರಿಂದ ಸವರನ್‍ಗೆ ವಿನಿಮಯವಾಗಿ ರೂಪಾಯಿಯನ್ನು ಕೊಡುವ ಕ್ರಮವನ್ನು ಹಿಂತೆಗೆದುಕೊಳ್ಳಬೇಕು. 2 ರೂಪಾಯಿ ಅಪರಿಮಿತ ವಿಧಿಮಾನ್ಯ ಹಣವಾಗಿ ಉಳಿಯಬೇಕು. ಜೊತೆಗೆ ಸವರನ್ ಕೂಡ ಅಪರಿಮಿತ ವಿಧಿಮಾನ್ಯ ಹಣವಾಗಿ ಉಳಿಯಬೇಕು. 5 ಕೋಟಿಯಷ್ಟು 3 ರೂಪಾಯಿನ ಅಧಿಕ ನೋಟುಗಳನ್ನು ಚಲಾವಣೆಗೆ ಕೊಡಬೇಕು. ವಿನಿಮಯ ದರ 2 ಷಿಲಿಂಗ್‍ಗೆ 4 ರೂಪಾಯಿ ನಿಗದಿಯಾಗಬೇಕು. ರೂಪಾಯಿಯನ್ನು ಸ್ಟರ್ಲಿಂಗಿಗೆ ಕುಣಿಕೆ ಹಾಕುವ ಬದಲು ನೇರವಾಗಿ ಚಿನ್ನಕ್ಕೆ ಕುಣಿಕೆಹಾಕುವುದು ಅಪೇಕ್ಷಣೀಯ 5 ಅನಿರ್ಬಂಧಿತವಾಗಿ ಬೆಳ್ಳಿಯ ಆಮದು ಮತ್ತು ರಫ್ತು ಆಗುವುದಕ್ಕೆ ಅವಕಾಶಮಾಡಿಕೊಡಬೇಕು. ಸರ್ಕಾರ ಈ ಎಲ್ಲ ಸಲಹೆಗಳನ್ನೂ ಒಪ್ಪಿ ಅವನ್ನು ಕೂಡಲೆ ಜಾರಿಗೊಳಿಸಲು ಪ್ರಯತ್ನಿಸಿತು. ಆದರೆ ಈ ಸಮಿತಿಯ ಶಿಫಾರಸುಗಳೆಲ್ಲವೂ ಯುದ್ಧಕಾಲದಲ್ಲಿ ಉಂಟಾಗಿದ್ದ ಪರಿಸ್ಥಿತಿಗಳನ್ನು ಹತೋಟಿಗೆ ತರಲು ಉದ್ದೇಶಿಸದ್ದವಾಗಿದ್ದುವೇ ಹೊರತು ದೀಘಕಾಲೀನ ಸಮಸ್ಯೆಗಳಿಗೆ ಪರಿಹಾರವೂದಗಿಸಲು ಶಕ್ಯವಾಗಿಲಿಲ್ಲವೆಂಬುದು ಬಹಳ ಬೇಗ ಗೋಚರವಾಯಿತು. ಯುದ್ಧೋತ್ತರ ವರ್ಷಗಳಲ್ಲಿ ಆರ್ಥಿಕ ಪರಿಸ್ಥಿತಿ ಬದಲಾವಣೆ ಆದಂತೆ ಭಾರತದ ನಾಣ್ಯಪದ್ಧತಿಯ ಪುನರ್ವಿಮರ್ಶೆಯ ಅಗತ್ಯ ಕಂಡುಬಂದಿತು. ಇದಕ್ಕಾಗಿ 1925ರಲ್ಲಿ ನೇಮಕವಾದುದ್ದು ಹಿಲ್ಟನ ಯಂಗ್ ಆಯೋಗ. 

	ಈ ಆಯೋಗ ಅಂದಿನ ನಾಣ್ಯಪದ್ಧತಿಯನ್ನು ಸುದೀರ್ಘವಾಗಿ ಪರಿಶೀಲಿತು. ಭಾರತದ ನಾಣ್ಯ ನೇರವಾಗಿ, ಸ್ಟಷ್ಟವಾಗಿ ಗೊತ್ತಾಗುವಂತೆ ಚಿನ್ನದೊಡನೆ ಸಂಬಂಧ ಪಡೆಯಬೇಕು; ಅಂದರೆ ನಿಜವಾದ ಸ್ವರ್ಣಪ್ರಮಿತಿ ಸ್ಥಾಪನೆಯಾಗಬೇಕು ಎಂದು ಪ್ರತಿಪಾದಿಸಿತು. ಆದರೆ ಚಿನ್ನದ ನಾಣ್ಯ ಚಲಾವಣೆಯಲ್ಲಿರಬೇಕೆಂಬುದು ಆಯೋಗದ ಅಭಿಪ್ರಾಯವಾಗಿರಲಿಲ್ಲ. ಅದನ್ನು ಆಯೋಗ ವಿರೋಧಿಸಿತು. ಬೆಳ್ಳಿಯ ರೂಪಾಯಿ ಮತ್ತು ನೋಟುಗಳು ಚಲಾವಣೆಯ ಸಾಮಾನ್ಯ ಮಾಧ್ಯಮಗಳಾಗಿ ಮುಂದುವರಿಯಬೇಕು; ಆದರೆ ಕರೆನ್ಸಿಯ ಸ್ಥಿರತೆಯನ್ನು ಕಾಪಾಡಲು ಮತ್ತು ಜನರಲ್ಲಿ ನಾಣ್ಯದ ಬಗ್ಗೆ ನಂಬಿಕೆ ಹೆಚ್ಚುವಂತೆ ಮಾಡಲು ನಾಣ್ಯ ನೇರವಾಗಿ ಚಿನ್ನಕ್ಕೆ ಪರಿವರ್ತಿತವಾಗುವಂತಿರಬೇಕೆಂಬುದು ಆಯೋಗದ ಅಭಿಪ್ರಾಯವಾಗಿತ್ತು. ಹೀಗೆ ಆಯೋಗ ಸಲಹೆ ಮಾಡಿದುದು ಮಾಮೂಲಿ ಸ್ವರ್ಣ ಪ್ರಮಿತಿಯಿಂದ ಭಿನ್ನವಾದ ಸ್ವರ್ಣಪ್ರಮಿತಿ. ಈ ಪದ್ಧತಿಯಲ್ಲಿ ಚಿನ್ನದ ನಾಣ್ಯ ಚಲಾವಣೆಯಲ್ಲಿರುವುದಿಲ್ಲವಾದರೂ ರೂಪಾಯಿಯ ಚಿನ್ನದ ನಿರ್ದಿಷ್ಟ ನಮೂದಿತ ಬೆಲೆಯಲ್ಲಿ ಚಿನ್ನವನ್ನು ಯಾವ ಮಿತಿಗೂ ಒಳಪಡದೆ ಕೊಳ್ಳುವುದು ಮತ್ತು ಮಾರುವುದು ಸರ್ಕಾರದ ಅವಶ್ಯ ಕರ್ತವ್ಯವಾಗಿತ್ತು.

ಬೆಳ್ಳಿರೂಪಾಯಿಯ ಪ್ರಾಮುಖ್ಯವನ್ನು ಕಡಿಮೆ ಮಾಡಬೇಕೆಂಬುದೂ ಆಯೋಗದ ಅಭಿಪ್ರಾಯವಾಗಿತ್ತು. ಇದಕ್ಕಾಗಿ ಒಂದು ರೂಪಾಯಿ ನೋಟುಗಳನ್ನು ಪುನಃ ಚಲಾವಣೆಗೆ ಕೊಡುವಂತೆ ಅದು ಶಿಫಾರಸು ಮಾಡಿತ್ತು. ರೂಪಾಯಿ ನಾಣ್ಯಗಳನ್ನು ಟಂಕಿಸುವುದನ್ನು ಕ್ರಮೇಣ ಕಡಿಮೆ ಮಾಡುತ್ತ ಹೋಗಬೇಕೆಂದೂ ಆಯೋಗ ಅಭಿಪ್ರಾಯವಾಗಿತ್ತು.

ಆಯೋಗ ರೂಪಾಯಿ ಮತ್ತು ಸ್ಟರ್ಲಿಂಗ್ ವಿನಿಮಯಕ್ಕೆ ಹೊಸ ದರವನ್ನು ಸೂಚಿಸಿತು. ಯುದ್ಧ ಪೂರ್ವಕಾಲದಲ್ಲಿ 1 ರೂಪಾಯಿಗೆ 1 ಷಿಲಿಂಗ್ 4 ಪೆನ್ನಿ ಇದ್ದ ವಿನಿಮಯ ದರವನ್ನು 1 ಷಿಲಿಂಗ್ 6 ಪೆನ್ನಿದರಕ್ಕೆ ಬದಲಾಯಿಸುವಂತೆ ಅದು ಸಲಹೆ ನೀಡಿತು. ಇದರಿಂದ ರೂಪಾಯಿಯ ಮೌಲ್ಯ ಹೆಚ್ಚುತ್ತಿತ್ತು. ಆದರೆ ಈ ವಿನಿಮಯ ದರದಿಂದ ಭಾರತದ ರಫ್ತು ವ್ಯಾಪಾರಕ್ಕೆ ಧಕ್ಕೆ ಉಂಟಾಗುತ್ತದೆಂದು ಭಾವಿಸಿ ವ್ಯಾಪಾರಿ ವಲಯಗಳಲ್ಲಿ ಇದಕ್ಕೆ ವಿರೋಧ ವ್ಯಕ್ತಪಟ್ಟಿತು.

1927ರಲ್ಲಿ ಈ ಆಯೋಗದ ಸಲಹೆಗಳನ್ನು ಸರ್ಕಾರ ಒಪ್ಪಿಕೊಂಡು ಅವನ್ನು ಜಾರಿಗೆ ಕೊಡಲು ಯುಕ್ತ ಕ್ರಮಗಳನ್ನು ಕೈಗೊಂಡಿತು. ಇದರ ಪ್ರಕಾರ ಕರೆನ್ಸಿ ವಿಧೇಯಕವೊಂದಕ್ಕೆ ಒಪ್ಪಿಗೆ ನೀಡಲಾಯಿತು. ಇದರಂತೆ ರೂಪಾಯಿ ವಿನಿಮಯದರವನ್ನು 1 ಷಿಲಿಂಗ್ 6 ಪೆನ್ನಿಗೆ ನಿಗದಿ ಮಾಡಲಾಯಿತು. ರೂಪಾಯಿ ಮತ್ತು ಚಿನ್ನ ಇವುಗಳ ಸಮಮೌಲ್ಯದಲ್ಲಿ 8.47512 ಗ್ರೇನ್ ಎಂದು ನಿಗದಿಯಾಯಿತು. ನಿರ್ದಿಷ್ಟವಾದ ಸಮಮೌಲ್ಯದಲ್ಲಿ ಚಿನ್ನವನ್ನು ಕೊಳ್ಳುವ ಮತ್ತು ಮಾರುವ ಪರಿನಿಯತ ಕರ್ತವ್ಯವನ್ನು ಮೊದಲ ಬಾರಿಗೆ ಸರ್ಕಾರದ ಮೇಲೆ ಹೇರಲಾಯಿತು. ತೊಲ ಒಂದಕ್ಕೆ 21 ರೂಪಾಯಿ, 3 ಆಣೆ, 10 ಕಾಸು ಬೆಲೆಯಲ್ಲಿ ಭಾರತದ ವಿಧಿಮಾನ್ಯ ಹಣಕ್ಕೆ ವಿನಿಮಯವಾಗಿ ಉನ್ನತ ಗುಣಮಟ್ಟದ ಚಿನ್ನವನ್ನಾಗಲೀ ಸ್ಟರ್ಲಿಂಗನ್ನಾಗಲೀ ಪಡೆಯಬಹುದಾಗಿತ್ತು. ಆದ್ದರಿಂದ 1927ರ ನಾಣ್ಯ ಶಾಸನದ ಪ್ರಕಾರ ಜಾರಿಗೆ ಬಂದ ನಾಣ್ಯಪದ್ಧತಿ ಚಿನ್ನದಗಟ್ಟಿ ಮತ್ತು ಸ್ಟರ್ಲಿಂಗ್ ವಿನಿಮಯ ಕೂಡಿ ಆದ ನಾಣ್ಯ ಪದ್ಧತಿ ಎಂದು ಕರೆಯಲಾಗಿತ್ತು.

ಭಾರತದ ನಾಣ್ಯಪದ್ಧತಿ ಬ್ರಿಟಿಷ್ ನಾಣ್ಯ ಪದ್ಧತಿಯೊಡನೆ ನಿಕಟ ಸಂಬಂಧ ಹೊಂದಿದ್ದುದರಿಂದ 1931ರಲಿ ಬ್ರಿಟಿಷ್ ಸ್ವರ್ಣಪ್ರಮಿತಿಯನ್ನು ಕೈ ಬಿಟ್ಟಾಗ ಭಾರತ ಕೂಡ ಆ ಕ್ರಮವನ್ನನುಸರಿಸಿ 1927ರ ಕರೆನ್ಸಿ ಅಧಿನಿಯಮದ ಪ್ರಕಾರ ಚಿನ್ನ ಅಥವಾ ಸ್ಟರ್ಲಿಂಗನ್ನು ಭಾರತದ ವಿಧಿಮಾನ್ಯ ಹಣಕ್ಕೆ ವಿನಿಮಯವಾಗಿ ಮಾರಾಟ ಮಾಡುವುದು ಪರಿನಿಯತ ಕರ್ತವ್ಯವೆಂಬುದನ್ನು ತೆಗೆದುಹಾಕಲಾಯಿತು. ರೂಪಾಯಿ ಇನ್ನು ಮುಂದೆ 1 ಷಿಲಿಂಗ್ 6 ಪೆನ್ನಿ ದರದಲ್ಲಿ ಸ್ಟರ್ಲಿಂಗಿಗೆ ಕುಣಿಕೆ ಹಾಕಲ್ಪಟ್ಟಿರುತ್ತದೆಂದು ಪ್ರಕಟಿಸಲಾಯಿತು. ಆದರೆ ಕೂಡಲೇ 1927ರ ನಾಣ್ಯ ಅಧಿನಿಯಮವನ್ನು ಮತ್ತೆ ಜಾರಿಗೆ ತಂದು ಚಿನ್ನ ಅಥವಾ ಸ್ಟರ್ಲಿಂಗನ್ನು ಮಾರಾಟಮಾಡುವ ಕರ್ತವ್ಯವನ್ನು ಪುನಃ ಒಪ್ಪಿಕೊಳ್ಳಲಾಯಿತು. ಆದರೆ ಈ ಬಾರಿ ಚಿನ್ನ ಅಥವಾ ಸ್ಟರ್ಲಿಂಗನ್ನು ಮಾರುವುದನ್ನು ಇಂಪೀರಿಯಲ್ ಬ್ಯಾಂಕಿನ ನಿಯಂತ್ರಣಕ್ಕೆ ಒಳಪಡಿಸಿ ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಮಾತ್ರ ಚಿನ್ನ ಅಥವಾ ಸ್ಟರ್ಲಿಂಗನ್ನು ಒದಗಿಸುವ ಕರ್ತವ್ಯ ನಿರ್ವಹಿಸುವಂತೆ ಮಾಡಲಾಯಿತು.

ಎರಡೆನೆಯ ಮಹಾಯುದ್ಧದ ಅವಧಿಯಲ್ಲಿ ಭಾರತದ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಬೆಳ್ಳಿಯ ಪೂರೈಕೆಯನ್ನು ಕಾಪಾಡುವುದು, ಬೆಳ್ಳಿಯ ಬೆಲೆ ಏರದಂತೆ ನಾಣ್ಯವನ್ನು ಕರಗಿಸಿ ಬೇರೆ ಉದ್ದೇಶಗಳಿಗೆ ಅದನ್ನು ಬಳಸಿಕೊಳ್ಳುವುದನ್ನು ತಡೆಯುವುದು ಮತ್ತು ಅಗತ್ಯವಾದ ಪರಿಮಾಣದಲ್ಲಿ ಕಾಗದದ ಹಣವನ್ನು ಒದಗಿಸುವುದು ಇವು ಕೆಲವು ಪ್ರಮುಖ ಸಮಸ್ಯೆಗಳಾಗಿದ್ದುವು. ಬೆಳ್ಳಿ ನಾಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನದಲ್ಲಿ ಶಿಷ್ಟ ಬೆಳ್ಳಿ ನಾಣ್ಯಗಳಿಗೆ ಬದಲಾಗಿ ಸ್ವಲ್ಪ ಭಾಗ ಬೆಳ್ಳಿಯನ್ನು ಒಳಗೊಂಡ ನಾಣ್ಯಗಳನ್ನು ಚಲಾವಣೆಗೆ ಕೊಡಬೇಕೆಂದೂ ಒಂದು ಸೂಚನೆ. ಆ ವೇಳೆಗಾಗಲೇ ಬೆಳ್ಳಿ , ತಾಮ್ರ, ನಿಕ್ಕಲ್ ಮತ್ತು ಸತುವುಗಳ ಮಿಶ್ರಣದಿಂದ ನಾಣ್ಯಗಳನ್ನು ತಯಾರಿಸುವುದರ ಬಗ್ಗೆ ಟಂಕಸಾಲೆಯಲ್ಲಿ ಪ್ರಯೋಗಗಳು ನಡೆಯುತ್ತಿದ್ದವು. 1940ರ ವೇಳೆಗೆ ಬೆಳ್ಳಿ ನಾಣ್ಯಗಳನ್ನು ಕರಗಿಸಿ ಬೇರೆ ಉಪಯೋಗಗಳಿಗೆ ಬಳಸುವ ಪ್ರವೃತ್ತಿ ಮತ್ತಷ್ಟು ಹೆಚ್ಚಿದಾಗ ಕಡಿಮೆ ಬೆಳ್ಳಿಯನ್ನೊಳಗೊಂಡ ರೂಪಾಯಿ ನಾಣ್ಯವನ್ನು ಚಲಾವಣೆಗೆ ಕೊಡುವ ನಿರ್ಧಾರ ಕೈಗೊಳ್ಳಲಾಯಿತು. ಶಿಷ್ಟ ಬೆಳ್ಳಿ ನಾಣ್ಯಗಳನ್ನು ಸಾಮಾನ್ಯವಾಗಿ ಸಾರ್ವಜನಿಕ ಬಳಕೆಗೆ ಇನ್ನು ಮುಂದೆ ಬಿಡುಗಡೆ ಮಾಡಬಾರದೆಂದು ನಿರ್ಧರಿಸಲಾಯಿತು. ಶುದ್ಧ ಬೆಳ್ಳಿಯ 11/12 ಭಾಗದಷ್ಟುನ್ನು ಹೊಂದಿರುವ ಬೆಳ್ಳಿ ರೂಪಾಯಿಗಳಿಗೆ ಬದಲಾಗಿ  ದಷ್ಟು ಶುದ್ಧ ಬೆಳ್ಳಿ ಹೊಂದಿರುವ ಬೆಳ್ಳಿ ರೂಪಾಯಿಗಳನ್ನು ಕೂಡಲೇ ಬದಲಾವಣೆಗೆ ಕೊಡಲು 1940ರಲ್ಲಿ ನಿರ್ಧರಿಸಲಾಯಿತು. ಕ್ರಮೇಣ ಶಿಷ್ಟ ಬೆಳ್ಳಿಯ ರೂಪಾಯಿ ಮತ್ತು ಇತರ ಪೂರಕ ನಾಣ್ಯಗಳನ್ನು ಅನಾಣ್ಯೀಕರಣ ಮಾಡಲಾಯಿತು. ರೂಪಾಯಿ ಒಳಗೊಂಡಿದ್ದ ಶುದ್ಧ ಬೆಳ್ಳಿಯನ್ನು ಕಡಿಮೆ ಮಾಡಿದ ಪ್ರಮಾಣದಲ್ಲಿಯೇ 4 ಆಣೆ ಮತ್ತು 8 ಆಣೆಗಳ ಶುದ್ಧ ಬೆಳ್ಳಿಯ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಯುದ್ಧ ಸಮಯದಲ್ಲಿ ನಿಕ್ಕಲ್ ಉಳಿತಾಯ ಮಾಡುವುದರ ಅಗತ್ಯವಿದ್ದುದರಿಂದ ಪೂರಕ ನಾಣ್ಯಗಳ ನಿಕ್ಕಲ್ ಪ್ರಮಾಣವನ್ನು ಕಡಿಮೆ ಮಾಡುವುದು ಅನಿವಾರ್ಯವಾಯಿತು. ಎರಡು ಆಣೆ, ಒಂದು ಆಣೆ ಮತ್ತು ಅರ್ಧ ಆಣೆ ನಾಣ್ಯಗಳನ್ನು ನಿಕ್ಕಲ್ ಮತ್ತು ಹಿತ್ತಾಳೆಗಳ ಮಿಶ್ರಲೋಹದಿಂದ ತಯಾರಿಸುವುದು ಆರಂಭವಾಯಿತು. ತ್ರಾಮದ ಬೆಲೆ ಹೆಚ್ಚುತ್ತ ಹೋದುದರಿಂದ ಚಲಾವಣೆಯಲ್ಲಿದ್ದ ತ್ರಾಮದ ಕಾಸುಗಳನ್ನು ಕರಗಿಸುವ ಪ್ರವೃತ್ತಿ ಹೆಚ್ಚಿ ಪೂರಕ ನಾಣ್ಯದ ಅಭಾವ ಹೆಚ್ಚುತ್ತಿತ್ತು. ಆದ್ದರಿಂದ ಕಡಿಮೆ ತ್ರಾಮವನ್ನೊಳಗೊಂಡ, ಮಧ್ಯೆ ವೃತ್ತಾಕಾರದ ತೂತಿನಿಂದ ಕೂಡಿದ ಕಾಸುಗಳನ್ನು ಚಲಾವಣೆಗೆ ಕೊಡಲಾಯಿತು. ಈ ಎಲ್ಲ ಕ್ರಮಗಳಿಂದ ರೂಪಾಯಿ ಮತ್ತು ಪೂರಕ ನಾಣ್ಯಗಳ ಪೂರೈಕೆ ಉತ್ತಮಗೊಂಡಿತು. 

ಎರಡೆನೆಯ ಮಹಾಯುದ್ಧದ ಕಾಲದಲ್ಲಿ ಅಗತ್ಯವಿರುವಷ್ಟು ಕಾಗದದ ಹಣವನ್ನು ಚಲಾವಣೆಗೆ ಕೊಡುವುದಕ್ಕೂ ಆದ್ಯ ಗಮನ ಕೊಡಲಾಯಿತು. ಈ ಸಂಬಂಧದಲ್ಲಿ 20 ಮತ್ತು  ರೂಪಾಯಿಗಳ ನೋಟುಗಳನ್ನು ಬಿಡುಗಡೆ ಮಾಡಬೇಕಂಬುದನ್ನು ಪರಿಶೀಲಿಸಿ ಕೈಬಿಡಲಾಯಿತು. ಆದರೆ 2 ರೂಪಾಯಿಗಳ ಹೊಸ ಮೌಲ್ಯ ವರ್ಗದ ನೋಟುಗಳನ್ನು ಹೊಸ ವಿನ್ಯಾಸದ 10 ರೂಪಾಯಿ ನೋಟುಗಳನ್ನೂ ಭಾರತ ಸರ್ಕಾರದ 1ರೂಪಾಯಿ ನೋಟುಗಳನ್ನೂ ಚಲಾವಣೆಗೆ ಬಿಡಲಾಯಿತು. ಲಂಡನ್ನಿನಲ್ಲಿ ಮುದ್ರಿಸಿದ 1 ರೂಪಾಯಿ ಮೌಲ್ಯವರ್ಗದ 25 ಕೋಟಿ ನೋಟುಗಳನ್ನು ಭಾರತದಲ್ಲಿ ಚಲಾವಣೆಗೆ ಬಿಡಲಾಯಿತು (1940). ಈ ಎಲ್ಲ ಕ್ರಮಗಳಿಂದ ನಾಣ್ಯದ ಅಗತ್ಯ ಪೂರೈಕೆಯಾಯಿತಷ್ಟೇ ಅಲ್ಲದೆ ಭಾರತದ ನಾಣ್ಯ ಪದ್ಧತಿಯ ವಿಕಾಸದ ಮೇಲು ಪರಿಣಾಮ ಆಯಿತು.
ಎರಡೆನೆಯ ಮಹಾಯುದ್ಧದ ಅವಧಿಯಲ್ಲಿ ಸ್ಟರ್ಲಿಂಗ್ ವಿನಿಮಯ ಪ್ರಮಿತಿ ಭಾರತದಲ್ಲಿ ಮುಂದುವರಿಯಿತು. ಈ ವ್ಯವಸ್ಥೆ ಯುದ್ಧದಿಂದ ತೊಂದರೆಗೊಳಗಾಗಿದ್ದ ಬ್ರಿಟಿನ್ನಿಗೆ ಅನುಕೂಲಕರವಾಗಿತ್ತು. ಯುದ್ಧ ಕಾಲದಲ್ಲಿ ರೂಪಾಯಿ ಮೂಲಕ ಮಾಡಬೇಕಾಗಿದ್ದ ತನ್ನ ವೆಚ್ಚವನ್ನು ಭರಿಸಲು ಬ್ರಿಟನ್ ಸ್ಟರ್ಲಿಂಗ್-ರೂಪಾಯಿ ಸಂಬಂಧವನ್ನು ಉಪಯೋಗಿಸಿಕೊಂಡಿತು. ಲಂಡನ್ನಿನಲ್ಲಿದ್ದ ಭಾರತ ಸರ್ಕಾರದ ಲೆಕ್ಕಕ್ಕೆ ಸ್ಟರ್ಲಿಂಗ್ ಪ್ರತಿಭೂತಿಗಳನ್ನು ಜಮಾ ಮಾಡಿ ಬ್ರಿಟನ್ ತನ್ನ ಯುದ್ಧಕಾಲದ ರೂಪಾಯಿ ವೆಚ್ಚಕ್ಕೆ ಬೇಕಾದ ಹಣವನ್ನು ಪಡೆದುಕೊಂಡಿತು. ಈ ರೂಪದಲ್ಲಿ ಬ್ರಿಟನ್ನಿಗೆ ರೂ1600 ಕೋಟಿ ಸಾಲವಾಯಿತು. ಭಾರತ ಸರ್ಕಾರಕ್ಕೆ ಲಭಿಸಿದ ಸ್ಟರ್ಲಿಂಗ್ ಶಿಲ್ಕನ್ನು ಯುದ್ಧಕಾಲದಲ್ಲಿ ತಡೆಹಿಡಿದು ಅನಂತರ ಕಂತುಗಳಲ್ಲಿ ಬಿಡುಗಡೆ ಮಾಡಬೇಕೆಂದು ಒಪ್ಪಂದವಾಗಿತ್ತು. ತಡೆಹಿಡಿಯಲಾಗಿದ್ದ ಸ್ಟರ್ಲಿಂಗ್ ಶಿಲ್ಕನ್ನು ಮುಂದೆ ಭಾರತಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕಿಗೆ ವರ್ಗಮಾಡಿತು. ಇದನ್ನು ರಿಸರ್ವ್‍ಬ್ಯಾಂಕ್ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲು ಆಧಾರವಾಗಿ ಬಳಸಿಕೊಂಡಿತು. ರಿಸರ್ವ್ ಬ್ಯಾಂಕ್ ಚಲಾವಣೆಗೆ ಕೊಟ್ಟ ನೋಟುಗಳು 1938-39ರಲ್ಲಿ ರೂ 210.64 ಕೋಟಿ ಇದ್ದದ್ದು 1948-49ರಲ್ಲಿ ರೂ 1253.86 ಕೋಟೆಗೆ ಹೆಚ್ಚಿತು. ಹೀಗೆ ಹಣದ ಚಲಾವಣೆ ಹೆಚ್ಚಿದ್ದರಿಂದ ಭಾರತದಲ್ಲಿ ಬೆಲೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಯಿತು. 

	ಎರಡೆನೆಯ ಮಹಾಯುದ್ಧಾನಂತರ ಪ್ರಪಂಚದ ನಾಣ್ಯ ಪದ್ಧತಿಯಲ್ಲೇ ವಿಶಿಷ್ಟ ಬದಲಾವಣೆಗಳುಂಟಾಯಿತು. ಅವಕ್ಕನುಗುಣವಾಗಿ ಸ್ವತಂತ್ರ ಭಾರತದ ನಾಣ್ಯ ಪದ್ಧತಿಯಲ್ಲೂ ಬದಲಾವಣೆಯುಂಟಾಯಿತು. 1944ರಲ್ಲಿ ಬ್ರೆಟನ್‍ವುಡ್ಸ್‍ನಲ್ಲಿ ನಡೆದ ಮಹಾ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕನುಗುಣವಾಗಿ ಅಂತಾರಾಷ್ಟೀಯ ಹಣ ನಿಧಿಯ (ಐ.ಎಮ್.ಎಫ್) ಸ್ಥಾಪನೆಯಾಯಿತು. ಇದರ ನೇತೃತ್ವದಲ್ಲಿ ಯುದ್ಧಾನಂತರದ ನಾಣ್ಯ ಮತ್ತು ವಿನಿಮಯ ಪದ್ದತಿಯ ಸುಧಾರಣೆ ಆರಂಭವಾಯಿತು. ಅಂತಾರಾಷ್ಟೀಯ ಹಣನಿಧಿಯ ಪ್ರತಿ ಸದಸ್ಯ ರಾಷ್ಟ್ರವೂ ತನ್ನ ನಾಣ್ಯದ ಸಮಮೌಲ್ಯವನ್ನು ಚಿನ್ನ ಅಥವಾ ಅಮೆರಿಕನ್ ಡಾಲರಿನಲ್ಲಿ ಪ್ರಕಡಿಸಬೇಕೆಂದು ಒಪ್ಪಂದವಾಯಿತು. ಇದರಂತೆ ಭಾರತದ ಒಂದು ರೂಪಾಯಿ 0.268601 ಗ್ರಾಮ್ ಅಪ್ಪಟ ಚಿನ್ನಕ್ಕೆ ಸಮವೆಂದು ಪ್ರಕಟಿಸಲಾಯಿತು. ಈ ಪ್ರಕಟೆಣೆಯ ಅನಂತರ ಭಾರತದ ರೂಪಾಯಿ ನೇರವಾಗಿ ಚಿನ್ನದ ಸಮ ಮೌಲ್ಯದೊಂದಿಗೆ ಸಂಬಂಧ ಹೊಂದಿತು 1949ರಲ್ಲಿ ಬ್ರಿಟನ್ನಿನ ನಾಣ್ಯದ ಅಪಮೌಲ್ಯವಾದಾಗ ಭಾರತವೂ ತನ್ನ ನಾಣ್ಯವನ್ನು ಅಪಮೌಲ್ಯಗೊಳಿಸಲು ನಿರ್ಧರಿಸಿದ್ದರಿಂದ ರೂಪಾಯಿಯ ಸ್ವರ್ಣಮೌಲ್ಯ ಒಂದು ರೂಪಾಯಿಗೆ 0.186210 ಗ್ರಾಮ್‍ಗೆ ಇಳಿಯಿತು. ಅಂತಾರಾಷ್ಟೀಯ ಹಣ ನಿಧಿ ನಿರ್ಧರಿಸಿದ ಚಿನ್ನದ ಅಧಿಕೃತ ಬೆಲೆಯ ಆಧಾರದ ಮೇಲೆ ಯುದ್ಧನಂತರ ನಾಣ್ಯ ಪದ್ಧತಿ ರಚಿತವಾಗಿತ್ತು. ಆದರೆ 1975ರಲ್ಲಿ ಚಿನ್ನವನ್ನು ಅಂತಾರಾಷ್ಟೀಯ ಹಣ ವ್ಯವಸ್ಥೆಯಿಂದ ಹೊರತು ಮಾಡುವ ನಿರ್ಧಾರಕ್ಕನುಗುಣವಾಗಿ ಚಿನ್ನಕ್ಕೆ ಅಧಿಕೃತವಾದ ಬೆಲೆ ಇರುವುದಿಲ್ಲವೆಂದು ತೀರ್ಮಾನವಾಯಿತು. ಅಂತೆಯೇ ಅಂತಾರಾಷ್ಟೀಯ ವಿನಿಮಯ ನಿಧಿಯಿಂದ ರೂಪಿತವಾಗಿದ್ದ ಸಮಮೌಲ್ಯ ಪದ್ಧತಿಯೂ ಮುರಿದುಬಿತ್ತು. ಒಂದು ರಾಷ್ಟ್ರದ ನಾಣ್ಯ ಮತ್ತು ಮತ್ತೊಂದು ರಾಷ್ಟ್ರದ ನಾಣ್ಯದ ನಡುವಣ ವಿನಿಮಯ ದರ ಮುಕ್ತಪೇಟೆಯಲ್ಲಿ ಅವುಗಳ ಪರಸ್ಪರ ಬೇಡಿಕೆ ಮತ್ತು ನೀಡಿಕೆಗಳ ಮೇಲೆ ನಿರ್ಧಾರವಾಗುವ ಪದ್ಧತಿ ಜಾರಿಗೆ ಬಂತು. ಸಮಮೌಲ್ಯ ಪದ್ಧತಿ ಮುರಿದು ಬದ್ದ ಮೇಲೆಯೂ ಭಾರತದ ನಾಣ್ಯ ಪೌಂಡ್ ಸ್ಟರ್ಲಿಂಗ್‍ಗೆ ಕುಣಿಕೆ ಹಾಕಲ್ಪಟ್ಟಿದ್ದು ಪೌಂಡಿನ ಮೌಲ್ಯದಲ್ಲಿ ಆಗುತ್ತಿದ್ದ ಬದಲಾವಣೆಗನುಗುಣವಾಗಿ ರೂಪಾಯಿಯ ಬಾಹ್ಯ ಮೌಲ್ಯವೂ ವ್ಯತ್ಯಾಸವಾತುತ್ತಿತ್ತು. ಆದರೆ ಪೌಂಡ್ ದುರ್ಬಲವಾಗಿ ಅದರ ಮೌಲ್ಯ ಬಹಳ ಇಳಿಯುತ್ತ ಹೋದಾಗ ಭಾರತದ ನಾಣ್ಯವನ್ನು ಪೌಂಡಿಗೆ ತಗಲು ಹಾಕುವುದರಿಂದ ಭಾರತಕ್ಕೆ ನಷ್ಟ ಉಂಟಾಗುತ್ತದೆಂಬು ಅರಿವಾಗಿ ರೂಪಾಯಿಯನ್ನು ಪೌಂಡಿನ ಸಂಬಂಧದಿಂದ ಬೇರ್ಪಡಿಸಲಾಯಿತು. ಈಗ ಭಾರತದ ನಾಣ್ಯವನ್ನು ಪೌಂಡಿಗೆ ತಗಲು ಹಾಕದೆ ಆರು ಮುಖ್ಯ ದೇಶಗಳ ನಾಣ್ಯಗಳೊಡನೆ ಸಂಬಂಧ ಕಲ್ಪಿಸಿದೆ. ಆ ಆರು ನಾಣ್ಯಗಳ ಒಟ್ಟು ಮೌಲ್ಯದ ಬದಲಾವಣೆ ಅನುಗುಣವಾಗಿ ಭಾರತದ ನಾಣ್ಯದ ಹೊರ ಮೌಲ್ಯ ನಿರ್ಧಾರವಾಗುತ್ತದೆ.

	ಈಗಿನ ಭಾರತದ ನಾಣ್ಯ ದಶಮಾಂಶ ಪದ್ಧತಿಯ ಲೋಹನಾಣ್ಯಗಳು ಮತ್ತು ಕಾಗದದ ಹಣವನ್ನು ಒಳಗೊಂಡಿದೆ. ರೂಪಾಯಿ ಭಾರತದ ನಾಣ್ಯ ಏಕಮಾನ. ನಿಕಲ್‍ನಿಂದ ತಯಾರಾದ ಒಂದು ನೂರು ಪೈಸೆಗಳ ರೂಪಾಯಿ ನಾಣ್ಯ ಮತ್ತು ಐವತ್ತು ಪೈಸೆಗಳ ಅರ್ಧ ರೂಪಾಯಿ ನಾಣ್ಯ ಸಂಕೇತ ನಾಣ್ಯಗಳು ಮತ್ತು ಅಪರಿಮಿತ ವಿಧಿಮಾನ್ಯ ನಾಣ್ಯಗಳು. ಉಳಿದ ಪೂರಕ ನಾಣ್ಯಗಳಾದ 25ಪೈ. 20ಪೈ, 10ಪೈ. 5ಪೈ ಮತ್ತು ಒಂದು ಪೈಸೆ ನಾಣ್ಯಗಳೂ ಸಂಕೇತ ನಾಣ್ಯಗಳಾಗಿದ್ದು ಅವು ಪರಿಮಿತ ವಿಧಿಮಾನ್ಯ ನಾಣ್ಯಗಳಾಗಿವೆ. ಒಂದು ರೂಪಾಯಿ ನೋಟು ಭಾರತ ಸರ್ಕಾರ ಚಲಾವಣೆಗೆ ತಂದಿರುವ ಅಪರಿಮಿತ ವಿಧಿಮಾನ್ಯ ಕರೆನ್ಸಿ. ಉಳಿದ ನೋಟುಗಳೂ ಅಪರಿಮಿತ ಕರೆನ್ಸಿಗಳು (ಚಲಾರ್ಥಗಳು) ಇವು ಭಾರತೀಯ ಬ್ಯಾಂಕು ಚಲಾವಣೆಗೆ ತಂದಿರುವವು ಮತ್ತು ಅವು ಸಂಪೂರ್ಣವಾಗಿ ರಿಸರ್ವ್‍ಬ್ಯಾಂಕಿನ ನಿಯಂತ್ರಣಕ್ಕೆ ಒಳಪಟ್ಟಿರುವವು. ಕಾಗದದ ಹಣದ ಪದ್ಧತಿಯಲ್ಲೂ ಬದಲಾವಣೆಗಳಾತ್ತ ಬಂದಿದೆ. ಈಗ ಜಾರಿಯಲ್ಲಿರುವುದು ಕನಿಷ್ಠ ಮೀಸಲು ಪದ್ಧತಿ. ಇದರ ಪ್ರಕಾರ ನೋಟನ್ನು ಚಲಾವಣೆಗೆ ಕೊಡಲು ಆಧಾರವಾಗಿಡುವ ಮೀಸಲಿನಲ್ಲಿ ಕನಿಷ್ಠ ರೂ 200 ಕೋಟಿಯ ಚಿನ್ನ ಮತ್ತು ವಿದೇಶಿ ಪ್ರತಿಭೂತಿಗಳನ್ನು ಇಡಬೇಕು. 1956-57ಕ್ಕೆ ಹಿಂದೆ ಪ್ರಮಾಣನುಗುಣ ಮೀಸಲು ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. 1934ರ ಭಾರತೀಯ ರಿಸರ್ವ್‍ಬ್ಯಾಂಕ್ ಅಧಿನಿಯಮದ ಪ್ರಕಾರ ಚಲಾವಣೆಗೆ ನೀಡುವ ನೋಟುಗಳ ಶೇಕಡಾ 40ರಷ್ಟು ಮೊತ್ತವನ್ನು ಚಿನ್ನದ ನಾಣ್ಯ ಚಿನ್ನದ ಗಟ್ಟಿ ಅಥವಾ ಸ್ಟರ್ಲಿಂಗ್ ಪ್ರತಿಭೂತಿಗಳ ರೂಪದಲ್ಲಿ ಕಡ್ಡಾಯವಾಗಿ ಮೀಸಲಾಗಿ ಇಡಬೇಕಾಗಿತ್ತು. ಈ ಪದ್ಧತಿ ಅತಿ ಕಟ್ಟುನಿಟ್ಟಿನದಾಗಿದ್ದು ಹೆಚ್ಚು ನೋಟುಗಳನ್ನು ಚಲಾವಣೆಗೆ ತರಲು ಅಡ್ಡಿಯಾಗುತ್ತಿತ್ತು. ಯೋಚಿತ ಅಭಿವೃದ್ಧಿಯ ಅಗತ್ಯವನ್ನು ಪೂರೈಸಲು ಅವಶ್ಯವಾದ ಹೆಚ್ಚು ಕಾಗದದ ಹಣವನ್ನು ಬಿಡುಗಡೆ ಮಾಡಲು ಕನಿಷ್ಠ ಮೀಸಲು ಪದ್ಧತಿಯನ್ನು ಜಾರಿಗೆ ಕೊಡುವುದು ಅಗತ್ಯವೆನಿಸಿ ಅದನ್ನು ಈಗ ಅನುಸರಿಸಲಾಗುತ್ತಿದೆ.
(ಬಿ.ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ